ಕೆಟ್ಟದ್ದರಲ್ಲೂ ಒಳ್ಳೆಯದಿದೆ !

ಕೆಟ್ಟದ್ದರಲ್ಲೂ ಒಳ್ಳೆಯದಿದೆ !

ಪ್ರತಿದಿನ ವಾಕಿಂಗ್ ಹೋಗುವ ಅಭ್ಯಾಸವಿರುವುದರಿಂದ ಎಂದಿನಂತೆ ಬೆಳಿಗ್ಗೆ 6 ಗಂಟೆಗೆ ಹೊರಟೆ. ಅದೇ ಸಮಯಕ್ಕೆ ದಾರಿಯಲ್ಲಿ ಒಬ್ಬ ವ್ಯಕ್ತಿ ಹೋಗುತ್ತಿದ್ದ. ಅವನನ್ನು ಗಮನಿಸಿದರೆ ಅವನೊಬ್ಬ ಸೌಮ್ಯ ಸ್ವಭಾವದವ ಜೊತೆಗೆ ದೈವ ಭಕ್ತಿ ಇರುವವನಂತೆ ಅನಿಸುತ್ತಿತ್ತು. ಹಸುವೊಂದು ಅಲ್ಲೇ ರಸ್ತೆಯಲ್ಲಿ ಕಸದ ಗುಡ್ಡೆಯಲ್ಲಿ ಎಲೆ, ಸೊಪ್ಪು ಅಳಿದುಳಿದ ಆಹಾರ ತಿನ್ನುವ ಪ್ರಯತ್ನದಲ್ಲಿತ್ತು. ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿ ಹಸುವಿದ್ದ ಕಡೆ ಹೋಗಿ ಅದನ್ನು ಮುಟ್ಟಿ ನಮಸ್ಕರಿಸಲೆತ್ನಿಸಿದ. ಅದನ್ನು ಗಮನಿಸಿದ ಹಸು ಕಾಲಿನಿಂದ ಜಾಡಿಸಿ ಒದೆಯಲೆತ್ನಿಸಿತು ಅಷ್ಟರಲ್ಲಿ ಆತ ತಪ್ಪಿಸಿಕೊಂಡುಬಿಟ್ಟ. ಹಸು ಮತ್ತೆ ಅವನ ಕಡೆ ತಿರುಗಿ ಕೊಂಬಿನಿಂದ ತಿವಿಯಲು ಸಿದ್ದತೆ ಮಾಡಿಕೊಂಡಂತೆ ಕಾಣಿಸುತ್ತಿತ್ತು. ಅದನ್ನು ಗಮನಿಸಿದ ನಾನು ‘ಏಯ್ ಹೋಗ್ರಿ ಆ ಕಡೆ ಅದು ನೋಡ್ತಿರೋದು ನೋಡಿದ್ರೆ ಗ್ಯಾರಂಟಿ ತಿವಿಯುತ್ತೆ ನಿಮ್ಮನ್ನ, ಬೆಳಿಗ್ಗೆ ಬೆಳಿಗ್ಗೆ ಅದನ್ನು ಕೆಣಕೋಕೆ ಬಂದಿದೀರಲ್ರಿ, ಏನಾಗಿದೆ ನಿಮಗೆ?’ ಅಂದೆ. ಆ ವ್ಯಕ್ತಿ ನನ್ನ ಮಾತು ಕೇಳಿಸಿದರೂ ಕೇಳಿಸದಂತೆ ಹಸುವಿಗೆ ಕೈಮುಗಿದು ಮುಂದೆ ಹೊರಟರು. ಹಸು ತನ್ನ ಪಾಡಿಗೆ ತಾನು ಯಾವುದೇ ಪ್ರತಿಕ್ರಿಯೆ ತೋರದೆ ಸುಮ್ಮನಾಯಿತು.

ನನಗ್ಯಾಕೋ ಆ ವ್ಯಕ್ತಿ ವಿಚಿತ್ರವೆನಿಸತೊಡಗಿದ. ಹಸುವನ್ನು ಪ್ರತಿರೋಧಿಸುವ ಪ್ರಯತ್ನ ಮಾಡದಿದ್ದುದು ಮತ್ತಷ್ಟು ಕುತೂಹಲ ನೀಡಿತು. ಅವನ ಬಳಿ ಹೋಗಿ ಅದು ತಿವಿಯಲು ಬಂದರೆ ಅಲ್ಲೇ ಇದ್ದ ಕೋಲು ತೆಗೆದುಕೊಂಡು ಅದನ್ನು ಹೆದರಿಸುವುದನ್ನು ಬಿಟ್ಟು ಕೈಮುಗಿದು ಸುಮ್ಮನೆ ಹೋಗುತ್ತಿದ್ದೀರಲ್ಲಾ ಯಾಕೆ? ಅದೇನಾದರೂ ನಿಮಗೆ ತೊಂದರೆ ಮಾಡಿದ್ದರೆ ಏನು ಮಾಡಬೇಕಿತ್ತು? ಎಂದೆ.

ನನಗೆ ದೈವಭಕ್ತಿ ಹೆಚ್ಚು ಅದರಲ್ಲೂ ಹಸುವನ್ನು ನಾವು ಕಾಮಧೇನು ಎಂದು ನಂಬಿರುವುದರಿಂದ ಅದನ್ನು ನೋಡಿ ಸಾಧ್ಯವಾದರೆ ಮುಟ್ಟಿ ನಮಸ್ಕರಿಸಿ ಹೋಗುವುದು ನನ್ನ ಅಭ್ಯಾಸ. ಅದೊಂದು ನಿಷ್ಕಲ್ಮಶ ಮೂಖ ಪ್ರಾಣಿ ಅದನ್ನು ನೋಡಿದರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ. ಹಸು ತಿವಿಯುವ, ಒದೆಯುವ ಪ್ರಯತ್ನ ಮಾಡುವುದು ತನ್ನ ರಕ್ಷಣೆಗಾಗಿಯೇ ಹೊರತು ಇನ್ನೊಬ್ಬರ ಮೇಲಿನ ಕೋಪದಿಂದಲ್ಲ. ಅದು ಹಾಗೆ ಪ್ರತಿಕ್ರಿಯಿಸಿದ್ದು ತನ್ನ ಹಿಂದಿನ ಅನುಭವದಿಂದ. ನಗರದಲ್ಲಿ ಹಸುಗಳು ಅವಲಂಬಿಸಿರುವುದು ಸೊಪ್ಪು ತರಕಾರಿ ಅಂಗಡಿ ಹೋಟೆಲ್ ಇತ್ಯಾದಿ ಪ್ರದೇಶಗಳನ್ನು, ಅಲ್ಲಿಗೆ ಹೋದಾಗ ತಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತೆ ಎಂದು ಒಡೆದು ಕಳುಹಿಸುತ್ತಾರೆ. ಇದು ದಿನನಿತ್ಯದ ಅಭ್ಯಾಸವಾಗಿರುವುದರಿಂದ ಯಾರೇ ಮುಟ್ಟಲು ಬಂದರೂ ಅದು ಪ್ರತಿರೋಧಿಸುವುದು ಸಹಜ. ಅದು ತನ್ನ ರಕ್ಷಣೆಗಾಗಿ ಏನು ಮಾಡಬೇಕೋ ಅದನ್ನು ಮಾಡಿದೆ ಅದೇ ರೀತಿ ನನ್ನ ಪೂಜ್ಯ ಭಾವನೆಯನ್ನು ನಾನು ಸಲ್ಲಿಸಿದ್ದೇನೆ. ನನ್ನಂತೆ ಇನ್ನಷ್ಟು ಜನರು ಅದನ್ನು ಆತ್ಮೀಯತೆಯಿಂದ ನೋಡಿದರೆ ಅದನ್ನು ಮುಟ್ಟಿದಾಗ ಏನೂ ಮಾಡದೆ ಸುಮ್ಮನಿರುತ್ತದೆ ಎಂದು ಹೇಳಿ ಹೊರಟುಹೋದ.

ಆತನ ಮಾತು ಕೇಳಿ ನನಗೆ ಎರಡು ವಿಷಯಗಳು ಅರ್ಥವಾಯಿತು.

ಒಬ್ಬ ಮನುಷ್ಯನನ್ನು ತುಂಬಾ ಜನ ಕೆಟ್ಟದಾಗಿ ನಡೆಸಿಕೊಂಡರೆ ಮುಂದಿನ ದಿನಗಳಲ್ಲಿ ಅವನೆದುರು ಅವನನ್ನು ಪ್ರೀತಿಸಲು ಗೌರವಿಸಲು ಆತ್ಮಪೂರ್ವಕವಾಗಿ ಬರುವವರನ್ನೂ ಅದೇ ರೀತಿ ನೋಡುತ್ತೇವೆ.

ಶುದ್ಧ ಮನಸ್ಸಿನಿಂದ ಇನ್ನೊಬ್ಬರ ಬಳಿ ಹೋಗುವಾಗ ಇನ್ನೊಬ್ಬರ ಸ್ಥಿತಿಯನ್ನು ಅರಿಯುವ ತಾಳ್ಮೆಯನ್ನು ಅರಿತಾಗ ಮಾತ್ರ ನಮ್ಮ ಶುದ್ಧತೆಗೆ ಬೆಲೆ.
ಪರಿಸರ & ಪರಿಸ್ಥಿತಿಗಳು ಮನುಷ್ಯನನ್ನು ಒಳ್ಳೆಯವನು ಹಾಗೂ ಕೆಟ್ಟವನಾಗಿ ರೂಪಿಸುತ್ತವೆ.

ದೇವರಾಜು ಚನ್ನಸಂದ್ರ
ಲೇಖಕರು & ಜೀವನ ಕೌಶಲ್ಯ ತರಬೇತಿದಾರರು.

Leave a Comment

Your email address will not be published. Required fields are marked *

Shopping Cart
Scroll to Top