ಅಪ್ಪ ನೀ ಸಾಯಬಾರದೇಕೆ ?
ಯಾವುದೋ ಕೆಲಸದ ಮೇಲೆ ಮೈಸೂರಿಗೆ ಹೋಗಿದ್ದೆ. ಅಲ್ಲಿ ಸುತ್ತಾಟದ ಅನಿವಾರ್ಯತೆ ಇದ್ದುದರಿಂದ ಸಿಟಿ ಬಸ್ ಸ್ಟ್ಯಾಂಡಿನಲ್ಲಿ ಬಸ್‍ಗಾಗಿ ಕಾಯುತ್ತಾ ಕುಳಿತಿದ್ದೆ. ಅಲ್ಲೇ ಪಕ್ಕದ ಬೆಂಚಿನಲ್ಲಿ ಒಬ್ಬ ವ್ಯಕ್ತಿ ಆತನೊಂದಿಗೆ 4 ವರ್ಷದ ಒಂದು ಹೆಣ್ಣು ಮಗು & 2 ವರ್ಷದ ಒಂದು ಗಂಡು ಮಗು ಕುಳಿತಿದ್ದರು. ಆ ವ್ಯಕ್ತಿ ಕಂಠಪೂರ್ತಿ ಕುಡಿದಿದ್ದ, ಮಾತುಗಳು ಮಿತಿಮೀರಿ ಹೊರಬರುತ್ತಿದ್ದವು. ದೇಹ ತನ್ನ ಸ್ಥಿಮಿತವನ್ನು ಕಳೆದುಕೊಂಡಿತ್ತು. ಮನೆಗೆ ಹೋಗಲೆಂದೋ ಏನೋ ಒಂದಷ್ಟು ಬಾಳೆಹಣ್ಣನ್ನು ಒಂದು ಕವರ್‍ನಲ್ಲಿ ಇಟ್ಟುಕೊಂಡಿದ್ದ.
ಕೆಲ ಸಮಯಕ್ಕೆ ಕವರ್‍ನಲ್ಲಿದ್ದ ಬಾಳೆಹಣ್ಣನ್ನು ತೆಗೆದು ಕಷ್ಟಪಟ್ಟು ಬಿಡಿಸಿ ಪರಿಶ್ರಮದಿಂದ ಬಾಯಿಗಿಡಲು ಯತ್ನಿಸುತ್ತಿದ್ದ. ಅರ್ಧ ಹಣ್ಣು ಬಾಯಿಗೆ ಮತ್ತರ್ಧ ನೆಲಕ್ಕೆ ಬೀಳುತ್ತಿದ್ದರೂ ಅದರ ಪರಿವೆಯಿಲ್ಲದೇ ತನ್ನ ಲೋಕದಲ್ಲಿ ತಾನು ಮುಳುಗಿ ಹೋಗಿದ್ದ. ಅಕ್ಕಪಕ್ಕದಲ್ಲಿ ಕುಳಿತಿದ್ದ ಆ ಪುಟ್ಟ ಮಕ್ಕಳು ಅಪ್ಪ ಹಣ್ಣು ತಿನ್ನುವುದನ್ನೇ ನೋಡುತ್ತಾ ತಾವು ತಿನ್ನುವ ಬಯಕೆಯನ್ನು ವ್ಯಕ್ತಪಡಿಸದೇ ಸುಮ್ಮನೆ ಕುಳಿತಿದ್ದವು. ಮಕ್ಕಳು ಹಣ್ಣುಗಳನ್ನು ನೋಡುತ್ತಿದ್ದುದನ್ನು ಕಂಡರೆ ಎಂತಹವರಿಗೂ ಕೊಟ್ಟುಬಿಡಬೇಕು ಎನಿಸುವಂತಿತ್ತು. ಹಣ್ಣಿಗಾಗಿ ಕಾದು ತಮ್ಮ ಹೆಂಜಲನ್ನು ತಾವೇ ನುಂಗುತ್ತಿದ್ದರೇ ವಿನಃ ಅಪ್ಪನನ್ನು ಕೇಳುವುದಾಗಲಿ, ತಾವೇ ತೆಗೆದುಕೊಂಡು ತಿನ್ನುವ ಪ್ರಯತ್ನವಾಗಲಿ ಮಾಡಲೇ ಇಲ್ಲ. ಅಪ್ಪನನ್ನು ಕೇಳಲಾಗದ ಸ್ಥಿತಿಯಲ್ಲಿ ಮಕ್ಕಳಿದ್ದಾರೆ ಎಂದರೆ ಅದೆಷ್ಟು ಭಯ ಇಟ್ಟಿರಬೇಕು ಎನಿಸಿತು. ಮಕ್ಕಳೆದುರಿಗೆ ಮಕ್ಕಳಿಗೆ ಕೊಡದೆ ಹಣ್ಣು ತಿನ್ನುವ ತಂದೆ ಇವನಂತಾ ನಿರ್ಧಯಿ ಎನಿಸತೊಡಗಿತು.
ದೇಹ ಸ್ಥಿಮಿತವಿಲ್ಲದ್ದರಿಂದ ಬಾಳೆಹಣ್ಣಿನ ಕವರ್ ಕೈಜಾರಿ ಕೆಳಗೆ ಬಿತ್ತು ಅದನ್ನು ಎತ್ತಿಕೊಳ್ಳುವ ಪ್ರಯತ್ನದಲ್ಲಿ ಆತನೂ ಕೆಳಗೆ ಬಿದ್ದು ಬಿಟ್ಟ. ಮೇಲೇಳಲೂ ಅವನಿಂದ ಆಗುತ್ತಿಲ್ಲ. ಪಕ್ಕದಲ್ಲಿ ಕುಳಿತಿದ್ದ ಎರಡೂ ಮಕ್ಕಳು ಬೆಂಚಿನಿಂದ ಕೆಳಗಿಳಿದು ಜೋರಾಗಿ ಅಳಲಾರಂಭಿಸಿದರು. ಅದೇಕೋ ಅಂತದೊಂದು ಸನ್ನಿವೇಶ ನನ್ನ ಕಣ್ಣಿನಲ್ಲಿ ನೀರು ತುಂಬಿಕೊಳ್ಳುವಂತೆ ಮಾಡಿದವು. ಮಕ್ಕಳ ಸ್ಥಿತಿಯನ್ನು ಕಂಡು ಹತ್ತಿರಕ್ಕೆ ಹೋದೆ. ಆ ನಾಲ್ಕು ವರ್ಷದ ಹೆಣ್ಣು ಮಗುವನ್ನು ಪಾಪು ನಿಮ್ಮದು ಯಾವ ಊರು? ನಿಮ್ಮ ಮನೆಯಿಂದ ಬೇರ್ಯಾರೂ ಬಂದಿಲ್ಲವಾ ? ಎಂದಿದ್ದಕ್ಕೆ ಯಾರೂ ಬಂದಿಲ್ಲಾ ಎಂದು ಅಳುತ್ತಾ ಹೇಳಿ ಸುಮ್ಮನಾಯಿತು.
ಅಲ್ಲೇ ಪಕ್ಕದಲ್ಲಿದ್ದ ಬಸ್ಸಿನ ಕಂಡಕ್ಟರ್ ಕೆಳಗಿಳಿದು ಇವನ ಜೀವನವೆಲ್ಲಾ ಇದೆ ಆಯ್ತು? ಕುಡಿದು ಸಾಯ್ತಾನೆ, ಯಾಕಾದ್ರೂ ನಿಮ್ಮಂತವರು ಬದುಕಿದ್ದೀರೋ ಗೊತ್ತಿಲ್ಲ. ನಿಮ್ಮಂತವರಿಗ್ಯಾಕೆ ಬೇಕು ಮಕ್ಳು, ನೀನಿಂಗೆ ಅಂತ ಗೊತ್ತಿದ್ರೂ ಮಕ್ಳನ್ನ ನಿಂಜೊತೆ ಕಳಿಸ್ತಾರಲ್ಲ ಮನೆಯವ್ರಿಗೂ ಬುದ್ಧಿ ಇಲ್ಲ. ಈ ಚಿಕ್ಕ ಮಕ್ಕಳನ್ನ ಜೊತೆಯಲ್ಲಿ ಕರೆದುಕೊಂಡು ಬಂದು ಕುಡಿದು ಬಿದ್ದಿದಿಯಲ್ಲ, ಯಾವಾಗ್ ಬುದ್ದಿ ಕಲೀತೀರೋ ಗೊತ್ತಿಲ್ಲ ಎಂದು ಬೈಯ್ಯತೊಡಗಿದ. ಇವನು ಇಲ್ಲೇ ಬಿದ್ದಿರಲಿ ಕುಡಿದದ್ದು ಇಳಿದ ಮೇಲೆ ಎದ್ದು ಬರಲಿ, ಇವ್ರ ಊರು ನಂಗೆ ಗೊತ್ತು ಮಕ್ಳನ್ನ ಕರ್ಕೊಂಡು ಹೋಗಿ ಬಿಡ್ತೀನಿ ಎನ್ನುತ್ತಾ ಹತ್ರೋ ಮಕ್ಳ ಬಸ್ಸು ಎಂದರು. ಆದರೆ ಆ ಮಕ್ಕಳು ಅಪ್ಪನನ್ನು ಬಿಟ್ಟು ಹೋಗಲು ಒಪ್ಪಲಿಲ್ಲ. ಅಪ್ಪನನ್ನು ಕಂಡರೆ ಮಕ್ಕಳಿಗೆ ಪ್ರೀತಿಯೋ, ಬಿಟ್ಟು ಹೋದರೆ ಮನೆಗೆ ಬಂದು ಒಡೆಯುತ್ತಾನೆ ಎಂಬ ಭಯವೋ ಗೊತ್ತಾಗಲಿಲ್ಲ.
ಅಪ್ಪ ಕಷ್ಟಪಟ್ಟು ಮೇಲೇಳಲು ಪ್ರಯತ್ನಿಸುತ್ತಿದ್ದಾನೆ ಆಗುತ್ತಿಲ್ಲ, ಬಾಯಿಂದ ಅನಗತ್ಯ ಕೆಟ್ಟ ಮಾತುಗಳು, ಮಕ್ಕಳ ಕರುಣಾಜನಕ ಸ್ಥಿತಿ ನೋಡಿದ ಪ್ರತಿಯೊಬ್ಬರಿಗೂ ಚಿಂತಾಜನಕ ಎನಿಸುತ್ತಿತ್ತು. ಎಂತಹವರಿಗೂ ಕರುಳು ಹಿಂಡುವ ಸ್ಥಿತಿ ಅದಾಗಿತ್ತು. ಅಲ್ಲಿದ್ದವರಿಗೆ ಅಪ್ಪ ಮುಖ್ಯವಾಗಿರಲಿಲ್ಲ ಆದರೆ ಮಕ್ಕಳಿಗೆ ಅಪ್ಪನನ್ನು ಬಿಟ್ಟು ಹೋಗುವ ಮನಸ್ಸಿರಲಿಲ್ಲ. ನಾಲ್ಕಾರು ಜನರ ಗುಂಪು ಸೇರಿತು. ಪರಿಸ್ಥಿತಿಯನ್ನು ಗಮನಿಸಿದ ಒಬ್ಬೊಬ್ಬರು ಒಂದೊಂದು ರೀತಿ ಬೈಯ್ಯಲಾರಂಭಿಸಿದರು. ಇಂತವರಿಗೇಕೆ ಮಕ್ಕಳು, ಇಂತಹ ಬಾಳಿಗಿಂತ ಸಾಯುವುದೇ ಲೇಸು, ಆ ಮಕ್ಕಳು ಏನು ಪಾಪ ಮಾಡಿದ್ವು, ಹೀಗೆಲ್ಲಾ ಮಾತನಾಡಲಾರಂಭಿಸಿದರು. ಆನಗಳ ಮಾತು ಕೇಳಿ ಸಹಿಸಲಾರದೆ ತೂರಾಡುತ್ತಾ ಮೇಲೆದ್ದವನೇ ಅಲ್ಲಿದ್ದವರಲ್ಲೊಬ್ಬನಿಗೆ ಒಡೆಯಲು ಹೋದ. ತಳ್ಳಿದರೆ ಸತ್ತೇ ಹೋಗ್ತೀಯಾ ನನ್ನ ಮೇಲೆ ಬರ್ತಿಯೇನೋ ಎಂದು ಅವನನ್ನು ಮುಟ್ಟುತ್ತಿದ್ದಂತೆ ತೂರಾಡಿ ದೂರದಲ್ಲಿ ಬಿದ್ದ. ಅವನು ಕೆಳಗೆ ಬೀಳುತ್ತಿದ್ದಂತೆ ಮಕ್ಕಳು ಜೋರಾಗಿ ಅಳುತ್ತಾ ಅಪ್ಪನ ಬಳಿ ಹೋದರು. ಮಕ್ಕಳ ರೋಧನೆ ಎಂತಹವರಿಗೂ ನೋವು ಬರಿಸುತ್ತಿತ್ತು. ಬಿಕ್ಕಿ ಬಿಕ್ಕಿ ಅಳುತ್ತಾ ಅಪ್ಪನನ್ನು ಮೇಲೆತ್ತಲು ಪ್ರಯತ್ನಿಸಿದರು. ಆ ಪುಟ್ಟ ಕಂದಮ್ಮಗಳ ಪ್ರೀತಿಗೆ ಮರುಗಬೇಕೋ, ಹೆಂಡದ ಅಮಲಿನಲ್ಲಿ ಅಲ್ಲೋಲ ಕಲ್ಲೋಲ ಸ್ಥಿತಿಯಲ್ಲಿರುವನನ್ನು ದ್ವೇಷಿಸಬೇಕೋ ಅರಿಯದಾಯಿತು.
ಅಪ್ಪನಿಲ್ಲದೆ ಮನೆಗೆ ಹೋಗಲು ಸಿದ್ದರಿಲ್ಲದ ಆ ಕಂದಮ್ಮಗಳ ಸ್ಥಿತಿಯನ್ನು ಅರಿತ ಎಲ್ಲರೂ ಅವನನ್ನು ಎತ್ತಿ ಬಸ್ಸಿಗೆ ಹಾಕಿ ಮಕ್ಕಳನ್ನೂ ಜೊತೆಗೆ ಕಳುಹಿಸಲು ವ್ಯವಸ್ಥೆ ಮಾಡಿದರು. ಆ ಘಟನೆ ನೋಡಿದ ಪ್ರತಿಯೊಬ್ಬರಿಗೂ ಅಂತಹ ತಂದೆ ಯಾವ ಮಕ್ಕಳಿಗೂ ಇರಬಾರದು ಎನಿಸುತ್ತಿತು.್ತ ನನಗೂ ಆಗನಿಸಿದ್ದು ಸುಳ್ಳಲ್ಲ. ಎಲ್ಲರೂ ಅಲ್ಲಿಗೇ ವಿಷಯವನ್ನು ಮರೆತು ತಮ್ಮ ಕೆಲಸದ ಕಡೆ ಗಮನ ಕೊಟ್ಟರು ಆದರೆ ಆ ಪುಟ್ಟ ವಯಸ್ಸಿನಲ್ಲೂ ತಂದೆಯನ್ನು ಬಿಟ್ಟು ಹೋಗಲಾರದೆ ಅಳುತ್ತಾ ಕುಳಿತ ಮಕ್ಕಳಿಗೆ ಅಪ್ಪನೇ ಪ್ರಪಂಚವಾಗಿದ್ದ.
ಕುಡಿದಾಗ ಅವನೊಬ್ಬ ಮತಿಗೇಡಿ ಇರಬಹುದು ಕುಡಿಯದಿದ್ದಾಗ ಪ್ರೀತಿಯ ಅಮೃತವನ್ನೇ ಮಕ್ಕಳಿಗೆ ಉಣಿಸಿರಬಹುದು. ನೋಡುವ ನಾವುಗಳು ಒಂದು ದಿನ ಪರಿಸ್ಥಿತಿಯ ಕೈಗೊಂಬೆಗಳಾಗಿ ಶಪಿಸಿರಬಹುದು ಆದರೆ ನಾವ್ಯಾರು ಮಕ್ಕಳ ಭವಿಷ್ಯ ಕಟ್ಟುವುದಿಲ್ಲ. ಕುಡುಕನಾದರೂ ಅವನೇ ಮಕ್ಕಳಿಗೆ, ಮನೆಗೆ ಆಧಾರ ಅಲ್ಲವೇ? ಜಗತ್ತಿಗೆ ಅವನು ಬೇಡವಾದರೂ ಆ ಮಕ್ಕಳಿಗೆ ಅವನು ಬೇಕು ಎಂದು ನನ್ನೊಳಗಿನ ಮಾತು ಪಿಸುಗುಟ್ಟಲಾರಂಭಿಸಿತು. ಅವನು ಬೇಗ ತನ್ನ ದುಶ್ಚಟದಿಂದ ಹೊರಬಂದು ಮಕ್ಕಳ ಭವಿಷ್ಯವನ್ನು ರೂಪಿಸಲಿ ಎಂಬ ಪ್ರಾರ್ಥನೆ ನನ್ನೊಳಗೆ ನಡೆಯಿತು. ಒಬ್ಬ ಸಾಮಾನ್ಯನಾಗಿ ಆತ ಸಾಯಬಾರದೇಕೆ ಎನಿಸಿತು ಆದರೆ ಆ ಮಕ್ಕಳ ಸ್ಥಾನದಲ್ಲಿ ನಿಂತಾಗ ಅಪ್ಪ ನೀ ಸಾಯಬಾರದೇಕೆ ಎಂದರೆ ನಿನ್ನ ಕರುಳಿನ ಕುಡಿಗಳ ಪ್ರೀತಿ & ಭವಿಷ್ಯ ನಿನ್ನಲ್ಲಿ ಅಡಗಿದೆ.
ದೇವರಾಜು ಚನ್ನಸಂದ್ರ
ಲೇಖಕರು & ಜೀವನ ಕೌಶಲ್ಯ ತರಬೇತಿದಾರರು.